Showing posts with label Article. Show all posts
Showing posts with label Article. Show all posts

10 March 2011

ಪ್ರತಿಬಿಂಬ

ಸುಂದರವಾಗಿ ಕಾಣುವ ಆಸೆ ಯಾರಿಗಿಲ್ಲ? ಇಂದಿನ ಸಮಾಜದಲ್ಲಿ ನೋಟಕ್ಕೆ ಪ್ರಾಮುಖ್ಯತೆ.
ಈ ಆಸೆಗೆ ಕನ್ನಡಿಯೂ ಒಂದು ಕಾರಣ. ಅದೇ ಒಂದು ಪರಿಹಾರ ಕೂಡ.
ಪುರಾಣಗಳಲ್ಲೂ ಕನ್ನಡಿಯ ಉಲ್ಲೇಖಗಳಿವೆ. ಶ್ರೀರಾಮ ಬಾಲ್ಯದಲ್ಲಿ ಚಂದಿರ ಬೇಕೆಂದು ಹಠ ಹಿಡಿದಾಗ
ಕನ್ನಡಿಯ ಬಳಸಿದ ಕಥೆ ಗೊತ್ತೇ ಇದೆ. ಇನ್ನು ಕರ್ನಾಟಕದ ಸುಂದರ ಶಿಲ್ಪ-ದರ್ಪಣ ಸುಂದರಿ-ಕನ್ನಡಿಗೂ
 ಕನ್ಯೆಯರಿಗೂ ಇರುವ ಅನನ್ಯ ಬಂಧದ ನಿದರ್ಶನ. ದರ್ಪಣ ಎಂಬ ಶಬ್ದದಲ್ಲೇ ದರ್ಪ ಇರುವುದರಿಂದ
 ಸುಂದರಿಯರ ದರ್ಪದ ಮೂಲ ಕನ್ನಡಿಯೇ ಇರಬೇಕೆಂದು ನನ್ನ ಶಂಕೆ. ಕನ್ಯೆಯಯರ ಜಂಭದ ಚೀಲದಲ್ಲಿ
ಕನ್ನಡಿಗೆ ಮೊದಲ ಸ್ಥಾನ. ಇನ್ನು ಇವರು ಕನ್ನಡಿಯೆದೆರು ನಿಂತರೆ ಸಮಯಕ್ಕೂ ಬೇಸರ.

  ಕನ್ನಡಿ ಕಥೆ, ಕವನ ಮತ್ತು ಜನಪದದಲ್ಲೂ ವಿಶಿಷ್ಟ ಸ್ಥಾನ ಪಡೆದಿದೆ. ಅಮೂರ್ತ ರೂಪಕಗಳು,
ಚಂದದ ಹೋಲಿಕೆಗಳಿಗೆ ಕನ್ನಡಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕನ್ನಡಿಯನ್ನು ಮನಸ್ಸು,
ಕಣ್ಣುಗಳಿಗೆ ಹೋಲಿಸುವದು ಸಾಮಾನ್ಯ. ಗಾದೆಗಳಲ್ಲೂ ಕನ್ನಡಿ ಬಳಕೆಯಾಗಿದೆ. ಉದಾಹರಣೆಗೆ
 "ಚೂರಾದ ಕನ್ನಡಿ; ಒಡೆದ ಮನಸು ಮತ್ತೆ ಸರಿಯಾಗದು" , "ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?" ಮುಂತಾದವು.

ಗಾಜನ್ನು ಕನ್ನಡಿಯ ಸೋದರಿಯೆನ್ನಬಹುದು. ಇತ್ತೀಚಿಗೆ ಎಲ್ಲೆಡೆ ಗಾಜಿನ ಕಟ್ಟಡಗಳು ತಲೆಯೆತ್ತುತ್ತಿವೆ.
ಎಲ್ಲೆಡೆ ಗಾಜಿನ ಬಾಗಿಲು, ಲೋಟ, ಟೀಪಾಯಿ ಹೀಗೆ ಎಲ್ಲವೂ ಗಾಜುಮಯವಾಗುತ್ತಿದೆ.
ಗಾಜಿನ ಅಪ್ರತಿಮ ನೋಟವೆ ಅದರ ಜನಪ್ರಿಯತೆಗೆ ಕಾರಣ. ಕನ್ನಡ ಹಾಗೂ ಕನ್ನಡಿಗೆ ಒಂದು ಸ್ವರ ಮಾತ್ರ
ವ್ಯತ್ಯಾಸ. ಕನ್ನಡವೂ ಕನ್ನಡಿಯಂತೆ ಸುಂದರ, ಅಪ್ರತಿಮ. ಕನ್ನಡಿಯಂತೆ ಜನಪ್ರಿಯವಾಗಬೇಕಿದೆ. 
 ಇನ್ನು ಕನ್ನಡಕವನ್ನು ತೆಗೆದುಕೊಂಡರೆ,ಅದನ್ನೂ ಕನ್ನಡಿ ಎನ್ನುವುದುಂಟು. 
 ಅಲ್ಲದೆ ಕಣ್ಣಿನೊಳಗೆ ಹಾಕುವ contact lenses ಕೂಡ ಕನ್ನಡಿಯೇ..

ನಾವೆಲ್ಲಾ ಕನ್ನಡಿಯೆದೆರು ನಿಂತು ನಮ್ಮ ಸಂತೋಷ ದುಖಗಳನ್ನು ಹೇಳಿಕೊಂಡಿರುತ್ತೇವೆ.
ನಮ್ಮೆಲ್ಲ ಸತ್ಯ ಹುಳುಕುಗಳನ್ನು ತಿಳಿದ ಕನ್ನಡಿ ನಿಜ ಸ್ನೇಹಿತನಾಗಬಲ್ಲುದು.
ನಮ್ಮ ಆತ್ಮಾವಲೋಕನಕ್ಕೆ ಪ್ರೇರಕವಾಗಬಹುದು. ಕನ್ನಡಿ ನೋಡುತ್ತಾ ನಿಂತರೆ ಹೊಸ ಹೊಸ
ಹೊಳಹುಗಳು ಮೂಡಬಹುದು. ಪ್ರಯತ್ನಿಸಿ ನೋಡಿ.