25 February 2011

ಸಾಗರ

ಇತ್ತೀಚಿಗೆ ಕುಂದಾಪುರದ ಸಮುದ್ರ ತೀರವೊಂದಕ್ಕೆ ಭೇಟಿ ನೀಡಿದೆ. ಸಮುದ್ರವೆಂಬ ನಿತ್ಯ ನಿರಂತರ ಸುಂದರ ಕಾವ್ಯದ ಮುಂದೆ
ಇದೊಂದು ಸಣ್ಣ ಹನಿ.
-----------------
ಮಿರಿ ಮಿರಿ ಮಿರುಗುವ ಮರಳ ರಾಶಿ.
ಕಣ್ಣ ತುಂಬುವ ನೀಲಿ; ಎದುರಲಿ

ನನ್ನುಸಿರ ತಾಳಕೆ ತೆರೆಗಳು ಮೊರೆ ಮೊರೆದು
ಅಥವಾ ನನ್ನೆದೆ, ತೆರೆಗಳ ಗಾನದ ಲಯ ಹಿಡಿದು
ಒಮ್ಮೆ ಪ್ರೀತಿಯ ಹೊಡೆತ, ಒಮ್ಮೆ ಜೋರು ಒದೆತ,
ಒಮ್ಮೆ ಮೌನ, ಒಮ್ಮೆ ಗಾನ..
ಮಡಿಲಲ್ಲಿ ಮಲಗಿಸಿಕೊಂಡ ಅಮ್ಮನಂತೆ.
 
ಅಲೆ ಅಲೆಯಲಿ ಅನಂತ ದಾಹ,
ರಣೋತ್ಸಾಹ, ತೀರದ ಮೋಹ!!!
ನನ್ನ ಕನ್ನಡಕದ ಮೇಲೆ ಹರಳುಗಟ್ಟಿದೆ ಉಪ್ಪು...
ಮಿದುಳು ಕೋಶದೊಳಗೆಲ್ಲೋ ಗೂಡು ಕಟ್ಟಿದೆ  ನೆನಪು!
-------------------- 

06 February 2011

ನಗದೇ...

ಈ ಹನಿಗಳ ಮೂಲ ನಂಗೊತ್ತಿಲ್ಲ.. ಆದರೆ ನನಗೆ ಮಜಾ ಕೊಟ್ಟ ಚಟಾಕಿಗಳಿವು.
--------
ಆರೋಗ್ಯವಾಗಿ ಸಂತೋಷವಾಗಿ ಬಾಳಲು
ನಗದೆ ಇರಬಾರದು.
ಆದರೆ ಸುಖವಾಗಿ ನೆಮ್ಮದಿಯಾಗಿ ಬಾಳಲು
ನಗದೇ ಇರಬೇಕು!
----------
ಕವಿಗಳು ಮಾಡುತ್ತಿದ್ದರು ಕಾವ್ಯವಾಚನ.
ಜನರು ನೋಡುತ್ತಿದ್ದರು ಕೈಯವಾಚ್ನ!

01 February 2011

ಇನ್ನೆರಡು ಚಟಾಕಿ

ಕ್ರಿಕೆಟ್ ವಿಶ್ವಕಪ್ ಹತ್ತಿರ ಬರುತಿದೆ. ಈ ಸಂದರ್ಭದಲ್ಲಿ ಈ ಹನಿ ಸೂಕ್ತವೆನಿಸಿತು..
----
ನಮ್ಮ ದೇಶದಿ ಹಾಕಿ, ಟೆನಿಸ್, ಕ್ರಿಕೆಟ್ಟಿದೆ
ಕ್ರಿಕೆಟ್ ಒಂದ ಬಿಟ್ಟು ಮತ್ತೆಲ್ಲವೂ ಕೆಟ್ಟಿದೆ!
-----
ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಸಮ್ಮೇಳನ ಯಶಸ್ವಿಯಾಗಲಿ,
ಕನ್ನಡದ ಕಂಪು ಎಲ್ಲೆಲ್ಲು ಹರಡಲಿ. 
ಕನ್ನಡದ ಪ್ರೇಮಿಯೊಬ್ಬ ತನ್ನವಳ ವರ್ಣಿಸುವ ಈ ಹನಿ ನಿಮಗೆ ಖುಷಿ ನೀಡಲಿ..
-----
ನಿನ್ನ ಮನ ಗಣಿತ
ನಿನ್ನ ಕೋಪ ಇಂಗ್ಲಿಷ್
ನಿನ್ನ ಬೇಸರ ವಿಜ್ಞಾನ 
ನಿನ್ನ ನಗು-ಮೊಗ ಸವಿಗನ್ನಡ


ಪ್ರೇಮ ನಿವೇದನೆ

ಪ್ರೇಮ ನಿವೇದನೆಯೊ೦ದರ ವಿಭಿನ್ನ ನಿರೂಪಣೆ.
ಸ೦ಜೆಗತ್ತಲು  ಮಬ್ಬು
ನಿಧಾನವಾಗಿ  ತು೦ಬುತಿದೆ ಪಬ್ಬು
ಭುವಿಯ ಎದೆಯಲ್ಲಿ ಬಿಸಿಯ ನಂಜು
ಸುತ್ತೆಲ್ಲೂ ಹೊತ್ತಿಲ್ಲ ಕತ್ತಲ ಪಂಜು

ನನ್ನ ಮಾತೆಲ್ಲ ಮುಗಿದು
ಕತ್ತಲು, ಕಾರ್ಮೋಡ ಕವಿದು
ಬಿಳುಪಾಯ್ತು ಕಪ್ಪು ಮೋಡದ ಅಂಚು
ನಿನ್ನ ಬೆರಳಲ್ಲಿ ನನ್ನ ಉಂಗುರದ ಮಿಂಚು
ಮಳೆ ಸುರಿದು, ಇಳೆ ತಣಿದು
ಶುರುವಾಯ್ತು ಪ್ರಣಯ.





19 January 2011

ಕನಸು

ಹೀಗೊಂದು ಕನಸು ಬಿತ್ತೆನಗೆ...
ಓದಿ ನೋಡಿ; ಖುಷಿಯಾಗಬಹುದು ನಿಮಗೆ.
-----
ಅವಳ ಕಣ್ಣ ಕಾಂತಿಯು
ನನ್ನೆದೆಯ ಗೋಡೆಯ ಸೀಳಿ
ಹೃದಯದೊಳಗೆಲ್ಲ ಹರಡಿತು ಬೆಳ್ಳಿ ಬೆಳದಿಂಗಳ..
ಆ ಬೆಳಕಲಿ ಕಂಡೆನವಳ
ಮೊಗವ, ಆ ಮುದ್ದು ನಗುವ
ಕಣ್ಣು ಮಿಟುಕಿಸಿ, ತೆರೆದು ನೋಡಲು ಬೆಳಗು ಮೂಡಿದೆ ಜಗದೊಳು..
ಛೆ! ಮತ್ತೆ ಕತ್ತಲು ಮನದೊಳು...

15 January 2011

some ಕ್ರಾಂತಿ

ಎಲ್ಲರಿಗೂ ವರ್ಷದ ಮೊದಲ ಹಬ್ಬ, ಸಂಕ್ರಾಂತಿಯ ಶುಭಾಷಯಗಳು.
ವರ್ಷದ ಮೊದಲಲ್ಲಿ ಮಾಡುವೆವು ಪ್ರತಿಜ್ಞೆ
ಮಾಡಬೇಕು some ಕ್ರಾಂತಿ.
ಆದರೆ ಕೊನೆಗೆ ಆಗುವುದು ಬರೇ ಸಂಕ್ರಾಂತಿ!
ಈ ಬಾರಿ ಹೀಗಾಗದಿರಲಿ, ಎಲ್ಲರ ಸಂಕಲ್ಪ ಹಾಗು ಬಯಕೆಗಳು ಈಡೇರಲಿ..

ಜೇನು ಕಡಿದಂತೆ..!

ಡುಂಡಿರಾಜ್ ರವರ  ಮತ್ತಷ್ಟು ಹನಿಗವನಗಳು..
-------------------------
ಪ್ರೇಯಸಿಯ ಫೋನ್ ಬಂದರೆ
ಜೇನು ಕುಡಿದಂತೆ,
ಹೆಂಡತಿಯ ಫೋನ್ ಬಂದರೆ
ಜೇನು ಕಡಿದಂತೆ!
--------------------------
ನಿಜ ಗೆಳೆಯಾ,
ನುಡಿದರೆ ಮುತ್ತಿನ ಹಾರದಂತಿರಬೇಕು.
ಆದರೆ ಸ್ವಲ್ಪ ಎಚ್ಚರ,
ಎಂಜಲು ಹಾರದಂತಿರಬೇಕು!
-----------------------------------